ಆಡಮ್ಸ್, ರಾಬರ್ಟ್
(1791-1875). ಐರ್ಲೆಂಡಿನ ವೈದ್ಯ, ಗುಂಡಿಗೆಯ ಹಲವಾರು ರೋಗಗಳ, ಕೀಲುವಾತದ ಕಟ್ಟುವಾರೆ (ಗೌಟ್) ರೋಗದ ಸಂಶೋಧಕ. ಯೂರೋಪಿನಲ್ಲಿ ವೈದ್ಯಕಲಿಕೆ ಮುಂದುವರಿಸಿ ಐರ್ಲೆಂಡಿನ ಹೆಸರಾಂತ ಶಸ್ತ್ರವೈದ್ಯನಾಗಿ 3 ಬಾರಿ ಅದರ ರಾಷ್ಟ್ರೀಯ ಸಂಘದ ಅಧ್ಯಕ್ಷನಾಗಿದ್ದ. ನಾಡಿನಿಧಾನಗೊಂಡು ತತ್ಕಾಲ ತಲೆ ತಿರುಗಿದಂತಾಗಿಸುವ ಗುಂಡಿಗೆರೋಗದ ಲಕ್ಷಣಗಳನ್ನು ವಿವರಿಸಿದ (1827). 20 ವರ್ಷಗಳ ಅನಂತರ ಅವನ ಸಂಗಾತಿ ವಿಲಿಯಂ ಸ್ಟೋಕ್ಸ್ ಈ ವಿಚಿತ್ರ ಲಕ್ಷಣಗಳ ರೋಗದೆಡೆಗೆ ಗಮನ ಸೆಳೆದುದರಿಂದ, ಈ ಲಕ್ಷಣಕೂಟಕ್ಕೆ (ಸಿಂಡ್ರೋಮ್) ಆಡಮ್ಸ್-ಸ್ಟೋಕ್ಸ್ ಲಕ್ಷಣ ಕೂಟವೆಂದು ಹೆಸರಿದೆ.			

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ